ಭೂತಾರಾಧನೆ – ಪ್ರವೇಶ

ಭಾರತದ ಅನೇಕ ಜನಪದ ಆರಾಧನಾ ಪರಂಪರೆಗಳಲ್ಲಿ ತುಳುನಾಡಿನ ‘ಭೂತಾರಾಧನೆ’ ಕೂಡ ಒಂದು . ಇದನ್ನು ‘ದೈವಾರಾಧನೆ‘ ಎಂದೂ ಕರೆಯುತ್ತಾರೆ . ಇದು ಕರ್ನಾಟಕದ ಪಶ್ಚಿಮ ಕರಾವಳಿಯ ಇಂದಿನ ಉಡುಪಿ ಜಿಲ್ಲೆ , ದಕ್ಷಿಣ ಕನ್ನಡ ಜಿಲ್ಲೆ , ಇಂದು ಕೇರಳಕ್ಕೆ ಸೇರಿರುವ ಕಾಸರಗೋಡು ಜಿಲ್ಲೆಯ ಭೂ ಪ್ರದೇಶಗಳಲ್ಲಿ ಈ ಆರಾಧನಾ ಪ್ರಕಾರ ಹರಡಿಕೊಂಡಿದೆ. ದಕ್ಷಿಣದಲ್ಲಿ ಕಾಸರಗೋಡಿನ ಚಂದ್ರಗಿರಿ ಹೊಳೆ , ಉತ್ತರದಲ್ಲಿ ಉಡುಪಿ ಸಮೀಪದ ಕಲ್ಯಾಣಪುರ ಹೊಳೆ ಇವುಗಳ ನಡುವಿನ ಪ್ರದೇಶವನ್ನು ‘ತುಳುನಾಡು’ ಎಂದು ಗುರುತಿಸಲಾಗುತ್ತದೆ. ಈ ಪ್ರದೇಶದ ಜನರ ಪ್ರಮುಖ ಸಂವಹನ ಭಾಷೆ ತುಳು. ಕೇರಳದ ‘ತೆಯ್ಯಂ’ ಭೂತಾರಾಧನೆಗೆ ಸಂವಾದಿಯಾದ ಆಚರಣೆ.

‘ಭೂತಾರಾಧನೆ’ ಎಂದೊಡನೆ ಕೆಲವರು ತಕ್ಷಣಕ್ಕೆ ತಪ್ಪಾಗಿ ಗ್ರಹಿಸುವಂತೆ ಅದು ದುಷ್ಟ ಶಕ್ತಿಗಳ ಆರಾಧನೆಯಲ್ಲ . ಪ್ರತಿಯೊಂದು ಸಂಸ್ಕತಿಗೂ ಅದರದ್ದೇ ಆದ ಅನನ್ಯತೆ ಇರುವುದನ್ನು ನಾವು ನೋಡಬಹುದು . ಜನಪದ ಸಮೂಹಗಳು ತಮ್ಮ ಅನುಭವಕ್ಕೆ ಬಂದ ಹಲವಾರು ಅಂಶಗಳನ್ನು ಸ್ವೀಕರಿಸಿ ತಮ್ಮದೇ ಆದ ಆರಾಧನಾ ಪದ್ದತಿಗಳನ್ನು ಪಾದೇಶಿಕವಾಗಿ ಬೆಳೆಸಿಕೊಂಡು ಬಂದಿವೆ . ‘ಭೂತ’ ಎಂಬ ಪದಕ್ಕೆ Devil,Ghost,Demon ಎಂಬಿತ್ಯಾದಿ ಅರ್ಥಗಳಿವೆಯಾದರೂ ತುಳುವರು ಪರಂಪರೆಯಿಂದ ಆರಾಧಿಸಿಕೊಂಡು ಬಂದ ಭೂತಗಳನ್ನು ‘ದೈವೀಕ ಶಕ್ತಿ’ ಗಳು ಎಂದು ನಂಬಲಾಗಿದೆ . ಇವು ನಂಬಿದವರಿಗೆ ಒಳಿತನ್ನು ಉಂಟುಮಾಡುವ , ನಂಬದವರಿಗೆ ಕೇಡನ್ನು ಬಗೆಯುವ ನೆಲದ ಶಕ್ತಿಗಳು ಎಂದು ತಿಳಿಯಲಾಗಿದೆ . ಹಾಗಾಗಿ ತುಳು ಆರಾಧನಾ ಪರಂಪರೆಯಲ್ಲಿ ಭೂತ ಮತ್ತು ದೈವ ಬೇರೆ ಬೇರೆಯಲ್ಲ . ಎರಡೂ ಒಂದೇ . ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ತುಳುನಾಡಿಗೆ ಬಂದ ಜರ್ಮನ್ ಮಿಷನರಿಗಳು ಈ ಆರಾಧನೆಯನ್ನು ದಾಖಲಿಸಿಕೊಳ್ಳುವಾಗ ‘ Devil Worship ‘ ಎಂದು ಕರೆದರು . ಅಲ್ಲಿಂದ ಮುಂದೆ ‘ಭೂತಾರಾಧನೆ’ ಎಂಬ ಶಬ್ದ ಪ್ರಯೋಗ ಚಾಲ್ತಿಗೆ ಬಂತು ಎನ್ನುವ ವಾದವೂ ಇದೆ . ವಾಸ್ತವಿಕವಾಗಿ ‘ಭೂತ’ ಮತ್ತು ‘ದೈವ’ ಎರಡೂ ಪದಗಳು ಸಂಸ್ಕ್ರತ ಶಬ್ದಗಳು . ದ್ರಾವಿಡ ಶಬ್ದಗಳಲ್ಲ ಎಂದುದನ್ನು ನಾವು ಗಮನಿಸಬೇಕು . ಮುಖ್ಯವಾಗಿ ತುಳುನಾಡಿನ ಭೂತಗಳು ‘Evil Spirit ’ ಗಳಲ್ಲ . ಅವು ‘Protective Spirit’ ಗಳು.

ನೂರಾರು ವರ್ಷಗಳಿಂದ ತುಳುನಾಡಿನ ಜನರ ಸಾಂಸ್ಕೃತಿಕ ಬದುಕನ್ನು ನಿರ್ದೇಶಿಸಿಕೊಂಡು ಬಂದಿರುವ ಭೂತಾರಾಧನಾ ಸಂಪ್ರದಾಯವು ಹಲವಾರು ಸಾಂಸ್ಕೃತಿಕ ಅಂಶಗಳನ್ನು ಒಳಗೊಂಡಿರುವ ಒಂದು ವಿಶೇಷವಾದ ಆರಾಧನಾ ಪರಂಪರೆ . ಇದೊಂದು ಧಾರ್ಮಿಕ ರಂಗಭೂಮಿಯೂ ಆಗಿದ್ದು ಕಾಲಾನುಕ್ರಮದಲ್ಲಿ ಇದರಲ್ಲಿ ಆರಾಧನಾಂಶ , ಕಲಾತ್ಮಕಾಂಶ , ಮನೋರಂಜಕಾಂಶ , ನ್ಯಾಯ ವಿತರಣಾಂಶ ಇತ್ಯಾದಿಗಳು ಸೇರ್ಪಡೆಗೊಂಡು ಇದೊಂದು ಸಂಕೀರ್ಣ ವ್ಯವಸ್ಥೆಯಾಗಿ ಬೆಳೆದು ಬಂದಿದೆ . ಇದೊಂದು ವರ್ಣಮಯ ಲೋಕ . ಬಣ್ಣ , ನೃತ್ಯ , ಸಂಗೀತ , ಶಿಲ್ಪ , ಸಾಹಿತ್ಯಾದಿಗಳು ವಿಚಿತ್ರವಾಗಿ ಮಿಳಿತವಾಗಿರುವ ವೇದಿಕೆ . ಇದರಲ್ಲಿ ಕ್ರಿಯಾಶೀಲವಾಗಿರುವ ಪ್ರತಿಯೊಂದು ಘಟಕದ ಆಳವಾದ ಅಧ್ಯಯನ ಕೈಗೊಳ್ಳಲು ಸಾಧ್ಯವಿದೆ . ಭೂತಾರಾಧನೆ ಅನಾದಿಕಾಲದಿಂದಲೂ ತುಳುವರ ಬದುಕಿಗೆ ಭದ್ರತೆಯನ್ನು, ರಕ್ಷಣೆಯನ್ನು , ಆತ್ಮವಿಶ್ವಾಸವನ್ನು ಒದಗಿಸಿದೆ. ಸಮಷ್ಟಿಯನ್ನು ಗಮನಿಸುತ್ತಾ ಸೌಹಾರ್ದಯುತವಾಗಿ ಸಮಾಜದಲ್ಲಿ ಬದುಕಲು ಸಹಕಾರಿಯಾಗಿದೆ . ಭೂತಾರಾಧನೆಯ ವಿವಿಧ ಹಂತಗಳಲ್ಲಿ ಸಮಾಜದ ಬೇರೆ ಬೇರೆ ಜಾತಿಗಳ ಜನ ಆರಾಧನೆಗೆ ಸಂಬಂಧ ಪಟ್ಟ ವಿವಿಧ ಕಾರ್ಯಗಳನ್ನು ನಿರ್ವಹಿಸುವುದು ಕೂಡ ಪರಂಪರೆಯಿಂದ ನಡೆದುಕೊಂಡು ಬಂದ ಪ್ರಮುಖವಾದ ಒಂದು ಅಂಶ .

ಆರಾಧನೆಯ ಭಾಗವಾಗಿ ಭೂತವು ಜೀಟಿಗೆ ( ದೊಂದಿ ಬೆಳಕು) ಹಿಡಿದಿರುವುದು.

ತುಳುನಾಡಿನಲ್ಲಿರುವ ದೈವಗಳನ್ನು ನಿರ್ದಿಷ್ಟ ಸಂಖ್ಯೆಯಲ್ಲಿ ಹೇಳುವುದು ಕಷ್ಟ . ಸುಮಾರು 400ಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಭೂತಗಳು ಆರಾಧನೆಗೊಳ್ಳುತ್ತಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ . ಕೆಲವು ದೈವಗಳಿಗೆ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುವುದುಂಟು . ಪಂಜುರ್ಲಿ ಭೂತವು 31 ಭಿನ್ನ ಹೆಸರುಗಳಿಂದ ಕರೆಯಲ್ಪಡುವುದನ್ನು ಡಾ. ಚಿನ್ನಪ್ಪ ಗೌಡರು ತಮ್ಮ ಸಂಶೋಧನಾ ಕೃತಿಯಲ್ಲಿ ಗುರುತಿಸಿದ್ದಾರೆ . ಹಾಗಾಗಿ ಮೂಲ ಸ್ವರೂಪದಲ್ಲಿ ಒಂದೇ ಆಗಿದ್ದರೂ ಸ್ಥಳ ಬದಲಾದಂತೆ ಅವುಗಳ ಹೆಸರು ಸ್ವಲ್ಪ ಮಟ್ಟಿಗೆ ವೇಷಭೂಷಣ ಮತ್ತು ಆರಾಧನಾ ವಿಧಾನದಲ್ಲಿಯೂ ಬದಲಾವಣೆ ಆಗುತ್ತದೆ. ಹೀಗೆ ಆದ ಬದಲಾವಣೆಯನ್ನೂ ಗುರುತಿಸುವುದಾದರೆ ಸುಮಾರು 1000 ಕ್ಕೂ ಮೇಲ್ಪಟ್ಟು ಪ್ರಬೇಧಗಳನ್ನು ನಾವು ಗುರುತಿಸಬಹುದು . ಭೂತಗಳ ಮೂಲ, ಅಂತಸ್ತು , ವ್ಯಾಪ್ತಿ , ಸ್ವರೂಪ ಇತ್ಯಾದಿಗಳ ದೃಷ್ಟಿಯಿಂದ ಹಲವು ಬಗೆಯಲ್ಲಿ ವರ್ಗೀಕರಣ ಮಾಡಬಹುದು. ದೈವಗಳಲ್ಲಿ ಪುರುಷ ರೂಪದವುಗಳು ಇರುವಂತೆ ಸ್ತ್ರೀ ರೂಪದ ದೈವಗಳು ಸಾಕಷ್ಟಿವೆ .ಉಭಯ ಲಿಂಗಗಳ ಅಂಶವನ್ನು ಕೆಲವೊಮ್ಮೆ ಸಾಂಕೇತಿಕವಾಗಿ ತಳೆದ ಅರ್ಧ ನಾರಿ ಸ್ವರೂಪದ ದೈವಗಳು ಇವೆ. ಸಮಾಜ ವ್ಯವಸ್ಥೆಯಲ್ಲಿ ತೋರಿಬರುವ ಶ್ರೇಣೀಕೃತ ಪದ್ಧತಿ ಮತ್ತು ಊಳಿಗಮಾನ್ಯ ಪದ್ಧತಿಯ ಪ್ರಭಾವವು ಸಹಜವಾಗಿ ದೈವಾರಾಧನಾ ವ್ಯವಸ್ಥೆಯಲ್ಲಿ ವ್ಯಕ್ತವಾಗಿದೆ. ಕೇವಲ ಹಿಂದೂ ಧಾರ್ಮಿಕ ಮೂಲದ ಭೂತಗಳಲ್ಲದೇ ಮುಸ್ಲಿಂ ಮತ್ತು ಜೈನ ಧರ್ಮದ ಸಾಮರಸ್ಯ ಸಾರುವ ಭೂತವಾದ ಬಬ್ಬರ್ಯ ( ಬೊಬ್ಬರ್ಯ) , ಮುಸ್ಲಿಂ ಮೂಲದ ಅಲೀ ಭೂತ , ಚೀನೀ ಭೂತ – ಅರಬ್ಬೀ ಭೂತ ಮುಂತಾದ ವಿದೇಶಿಯರು ಭೂತಗಳಾಗಿ ಬದಲಾದ ಘಟನೆಗಳು, ಹೀಗೆ ಕರಾವಳಿಯ ವಿವಿಧ ಜಾತಿ ಮತ್ತು ಧರ್ಮಗಳ ಸಾಮರಸ್ಯದ ಸೂಚಕವಾದ ಹಲವು ಭೂತಗಳ ಆರಾಧನೆಯೂ ಪ್ರಚಲಿತದಲ್ಲಿದೆ.

ಎಷ್ಟೋ ವೇಳೆ ಕೋರ್ಟು ಕಚೇರಿಗಳಲ್ಲಿ ನಡೆಯುವುದಕ್ಕಿಂತ ಚೊಕ್ಕದಾದ ನ್ಯಾಯ ತೀರ್ಮಾನವು ದೈವಗಳ ಸಮಕ್ಷಮದಲ್ಲಿ ನಡೆಯುತ್ತದೆ . ಹತ್ತು ಮಂದಿಯ ಸಮ್ಮುಖದಲ್ಲಿ ಆಗುವ ನ್ಯಾಯ ತೀರ್ಮಾನ , ನ್ಯಾಯಮೂರ್ತಿಯ ಸ್ಥಾನದಲ್ಲಿರುವಂತಹ ದೈವ ನೀಡುವ ಅಭಯ ವಾಕ್ಯ ಇವುಗಳಿಂದ ಜನರ ಮನಸ್ಸಿಗೊಂದು ಧೈರ್ಯ ಮತ್ತು ಆತ್ಮವಿಶ್ವಾಸ ಮೂಡುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು . ಕುಟುಂಬದ ದೈವಗಳ ಆರಾಧನೆಯ ಸಂದರ್ಭದಲ್ಲಿ ಸಂಬಂಧಪಟ್ಟವರು ಒಂದೆಡೆ ಕಲೆತು ಊಟ ಉಪಚಾರಗಳನ್ನು ಹೊಂದುವ , ಮಾತುಕತೆ ಆಡುವ, ಪ್ರೀತಿ ವಿಶ್ವಾಸಗಳನ್ನು ಪ್ರಕಟಿಸುವ ಅಪೂರ್ವ ಸನ್ನಿವೇಶದಿಂದ ಲಭಿಸುವ ಕೌಟುಂಬಿಕ ಪ್ರಯೋಜನ ಅತ್ಯಂತ ವಿಶೇಷವಾದದ್ದು .

ನ್ಯಾಯ ತೀರ್ಮಾನ ಮಾಡುತ್ತಿರುವ ದೈವ

ಭೂತಾರಾಧನೆಯ ಒಂದು ಕುಟುಂಬದ ಅಥವಾ ಒಂದು ಪ್ರದೇಶದ ಪ್ರಮುಖ ಆಗುಹೋಗುಗಳನ್ನು ನಿಯಂತ್ರಿಸುವ ಕೇಂದ್ರಗಳೂ ಆಗಿವೆ. ಇದರಲ್ಲಿ ಪಾಲ್ಗೊಳ್ಳುವ ಎಲ್ಲರೂ ದೈವಗಳು ನೀಡುವ ನಿರ್ಣಯಕ್ಕೆ ಬದ್ಧರಾಗಿದ್ದು ಈ ಅತಿಮಾನುಷ ಶಕ್ತಿಗಳು ತಮ್ಮ ಅನುಗ್ರಹವನ್ನು ಹಿಂತೆಗೆದುಕೊಂಡರೆ ಬದುಕು ದಾರುಣವಾಗಿ ತ್ತದೆ ಎಂಬ ನಂಬಿಕೆಯನ್ನು ಬೆಳೆಸಿಕೊಂಡಿದ್ದಾರೆ. ಸಾಮಾಜಿಕ ವ್ಯವಸ್ಥೆಯ ಶಿಸ್ತುಬದ್ಧವಾದ ಪರಿಪಾಲನೆಗೆ ಇದು ಸಹಾಯಕವಾಗಿದೆ. ಜನರ ಪಾಲಿಗೆ ಇದು ಮೂಢ ನಂಬಿಕೆಯಲ್ಲ ,ಮಾಂತ್ರಿಕ ವಿಧಿಯಿಲ್ಲ ನಾಟಕವಲ್ಲ ಇದು ಒಂದು ಜೀವಂತ ಸತ್ಯ. ಆದ್ದರಿಂದ ಭೂತಗಳನ್ನು ಇವರು ಸತ್ಯಗಳು ( ಸತ್ಯೊಲು) ಎಂದು ನಂಬುತ್ತಾರೆ.

ಪ್ರತಿಯೊಂದು ‘ಭೂತ’ದ ಇತಿಹಾಸವನ್ನು ಅರಿಯಲು ನಮಗಿರುವ ಬಹುಮುಖ್ಯ ಆಕರಗಳೆಂದರೆ ‘ಪಾಡ್ದನ’ಗಳು. ಮೌಖಿಕ ಸಾಹಿತ್ಯವಾದ ಪಾಡ್ದನಗಳು ತುಳುನಾಡಿನ ಜನಪದ ಸಾಹಿತ್ಯದ ಅಪೂರ್ವ ಖನಿಗಳು. ಇವುಗಳನ್ನು ಸಾಮಾನ್ಯವಾಗಿ ಜನಪದ ಕಥನ ಕವನಗಳ (Ballads) ಗುಂಪಿಗೆ ಸೇರಿಸಬಹುದು. ಆದರೆ ಅನೇಕ ಪಾಡ್ದನಗಳು Balladನ ವ್ಯಾಪ್ತಿಯನ್ನು ಮೀರಿ ಜನಪದ ಮಹಾಕಾವ್ಯ (Folk Epic) ಗಳಾಗುತ್ತವೆ . ಇನ್ನೂ ಕೆಲವು ಪಾಡ್ದನಗಳು ಲಾವಣಿ ಚಿತ್ರ (Ballad Cycle)ದ ಸ್ವರೂಪದವು. ವಸ್ತುವಿನ ದೃಷ್ಟಿಯಿಂದ ಪಾಡ್ದನಗಳು ಜನಪದ ಪುರಾಣ (Myths) ಗಳ ವರ್ಗಕ್ಕೆ ಸೇರುತ್ತವೆ . ಅನೇಕ ಪಾಡ್ದನಗಳಲ್ಲಿ ತುಳುನಾಡಿನ ಸಾಂಸ್ಕೃತಿಕ ಇತಿಹಾಸವು ಹಾಸು ಹೊಕ್ಕಾಗಿರುವುದನ್ನು ಗಮನಿಸಬಹುದು . ಈ ಕಥನಗಳಲ್ಲಿ ಕೆಲವೊಮ್ಮೆ ಅತಿಶಯೋಕ್ತಿ ಇರಬಹುದಾದರೂ ಇವು ಕೇವಲ ಕಲ್ಪನೆಗಳಿಗೆ ಸಂಬಂಧಪಟ್ಟದ್ದಲ್ಲ. ಕಥನಗಳಿಗೆ ಮತ್ತು ಆರಾಧನಾ ಸ್ಥಳಗಳಿಗೆ, ಅಲ್ಲಿ ನಡೆಯುವ ಆಚರಣಾ ವಿಧಿಗಳಿಗೆ ಸಂಬಂಧ ಇದ್ದೇ ಇರುತ್ತದೆ. ದೈವ ಕಥನವನ್ನು ವಿಧಿವತ್ತಾಗಿ ಸಂದರ್ಭೋಚಿತವಾಗಿ ಹಾಡುವುದು ದೈವಾರಾಧನೆಯ ಒಂದು ಅಂಗವಾಗಿದೆ .ಈ ಪಾಡ್ದನಗಳನ್ನು ಭೂತಧಾರಿಯಾದ ವ್ಯಕ್ತಿ ಅಥವಾ ಅವರ ಸಹವರ್ತಿಗಳು ಹಾಡುತ್ತಾರೆ . ಈ ಪಾಡ್ದನಗಳು ನಮಗೆ ಭೂತದ ಹುಟ್ಟು , ಅದರ ಮಹಾತ್ಮೆ , ಶೌರ್ಯ ಸಾಹಸಗಳು ಹಾಗೂ ಭೂತದ ಪ್ರಸರಣವನ್ನು ವಿವರಿಸುತ್ತದೆ . 

ಬಹುತೇಕ ಎಲ್ಲಾ ಜಾನಪದ ಪ್ರಕಾರಗಳ ಕಲಾಪಗಳು ಶೈಲೀಕೃತವಾಗಿರುವಂತೆ ದೈವ ಮಾಧ್ಯಮದ ಭಾಷೆ ಕೂಡ ಶೈಲೀಕೃತ ವಾಗಿದೆ. ದೈವದಿಂದ ಆವೇಶ ಭರಿಸಿಕೊಂಡ ಪಾತ್ರಿ(medium of deity) ಹಾಗೂ ದೈವದ ವೇಷ ತೊಟ್ಟ ( ದೈವಕ್ಕೆ ಕಟ್ಟಿದ) ದೈವ ಕಲಾವಿದ ನುಡಿಯುವ ನುಡಿಗಟ್ಟು ಅಥವಾ ಅಭಯ ವಾಕ್ಯ ಅತ್ಯಂತ ಪ್ರೌಢ ವಾದ ಸಾಹಿತ್ಯದಂತೆ ನಿಮಗೆ ಕೇಳಿಸುತ್ತದೆ. ಅದಕ್ಕೆ ಪೂರಕವಾಗಿ ದೈವ ಸನ್ನಿಧಿಯಲ್ಲಿ ಭಕ್ತರ ಪರವಾಗಿ ‘ಮದು’ ಅಥವಾ ‘ಮದಿಪು’ ಹೇಳುವವರು ( ಭಕ್ತರ ಪರವಾಗಿ ದೈವದ ಬಳಿ ಪ್ರಾರ್ಥನೆ ಮಾಡುವ ವ್ಯಕ್ತಿ | Mediator or Liaison person) ಬಳಸುವ ಭಾಷೆ ಕೂಡ ವಿಶಿಷ್ಟ ರೀತಿಯದ್ದಾಗಿದೆ. ಇವರನ್ನು ಮಧ್ಯಸ್ಥರು ಎಂದು ಕರೆಯುತ್ತಾರೆ. ಕುಟುಂಬಕ್ಕೆ ಸಂಬಂಧಪಟ್ಟ ಆರಾಧನೆಗಳಲ್ಲಿ ಕುಟುಂಬದ ಹಿರಿಯರೇ ಮಧ್ಯಸ್ಥರಾಗಿ ಕಾರ್ಯನಿರ್ವಹಿಸುವುದೂ ಇದೆ .

ಭಕ್ತರ ಪರವಾಗಿ ಮಧ್ಯಸ್ಥ (Mediator or Liaison person)ನು ದೈವದ ಬಳಿ ಪ್ರಾರ್ಥನೆ ಮಾಡುತ್ತಿರುವುದು .

ಭೂತಾರಾಧನೆಯಲ್ಲಿ ಬಳಕೆಯಾಗುವ ಹೆಚ್ಚಿನ ವಸ್ತುಗಳೆಲ್ಲಾ ಕೃಷಿ ಸಂಸ್ಕೃತಿಯ ಒಳಗಿನಿಂದಲೇ ಬಂದಂತವುಗಳು. ದೈವಾರಾಧನೆಯೊಂದಿಗೆ ಕಂಬಳ, ಕೋಳಿ ಅಂಕ , ಚೆಂಡು, ತಪ್ಪಂಗಾಯಿ, ಅಂಬೊಡಿ , ಸತ್ತಿ ಕಲ್ಲು ( ಶಕ್ತಿ ಕಲ್ಲುಗಳು) ಎತ್ತುವುದು, ಸೂಟೆದಾರೆ, ಮೊದಲಾದ ಕ್ರೀಡೆಗಳು ಆಚರಣೆಯ ಭಾಗವಾಗಿ ಬೆಳೆದು ಬಂದಿವೆ . ಈ ಕ್ರೀಡೆಗಳಿಗೂ, ಭೂತದ ಆರಾಧನೆಗೆ ಸಂಬಂಧವಿರುವುದು ಉಂಟು .

ಭೂತಗಳ ಉಗಮ ಮತ್ತು ಆರಾಧನೆಯ ಸ್ವರೂಪ , ಈ ಎರಡು ಮುಖ್ಯವಾದ ಅಂಶಗಳನ್ನಿಟ್ಟುಕೊಂಡು ಭೂತಗಳ ಸಾಂಸ್ಕೃತಿಕ ಪರಿಕಲ್ಪನೆಯನ್ನು ರೂಪಿಸಬಹುದು. ಭೂತಗಳು ಅಲೌಕಿಕ ಪ್ರಪಂಚಕ್ಕೆ ಸೇರಿದವುಗಳಾಗಿವೆ. ಈ ಅಲೌಕಿಕ ಪ್ರಪಂಚವನ್ನು ಜನರು ತಮ್ಮ ಕಲ್ಪನೆಯಿಂದ ಸೃಷ್ಟಿ ಮಾಡುತ್ತಾರೆ . ಆ ಅಲೌಕಿಕ ಜಗತ್ತಿನಲ್ಲಿ ಇದ್ದುಕೊಂಡೇ ವಾಸ್ತವ ಲೋಕದ ಜನರಿಗೆ ಭೂತಗಳು ಅಭಯವನ್ನೂ , ಮಾರ್ಗದರ್ಶನವನ್ನು ನೀಡುತ್ತವೆ ಎಂದು ಜನರು ನಂಬುತ್ತಾರೆ . ಈ ವಿಶಿಷ್ಟವಾದ ಸನ್ನಿವೇಶದ ನಿರ್ಮಾಣವು ಪ್ರಶಸ್ತವಾದ ಕಾಲ, ಸ್ಥಳ ಮತ್ತು ಪರಿಸರಗಳಿಗೆ ಬದ್ಧವಾಗಿರುತ್ತದೆ . ಹೀಗೆ ನಿರ್ಮಾಣಗೊಂಡ ಈ ವಿಶಿಷ್ಟವಾದ ಸನ್ನಿವೇಶವನ್ನು “ಮಧ್ಯಂತರ ಜಗತ್ತು” ಎಂದು ಕರೆಯಬಹುದು . ಈ ಮಧ್ಯಂತರ ಜಗತ್ತು ಒಂದು ತಾತ್ಕಾಲಿಕ ಜಗತ್ತು ( temporal realm) ಆಗಿರುತ್ತದೆ. ವಾಸ್ತವ ಜಗತ್ತಿನ ಮಂದಿ ಇಲ್ಲಿದ್ದುಕೊಂಡೇ ಅಲೌಕಿಕ ಜಗತ್ತಿಗೆ ಸೇರಿದವರನ್ನು ಕಾಣಬೇಕಾದರೆ , ಕಂಡು ಮಾತನಾಡಬೇಕಾದರೆ ಈ ಮಧ್ಯಂತರವೂ ಕಾಲ್ಪನಿಕವೂ ಆದ ಜಗತ್ತಿಗೆ ಅಲ್ಲಿನವರು ಬರಬೇಕಾಗುತ್ತದೆ . ಮಧ್ಯಂತರ ಜಗತ್ತಿನ ಸೃಷ್ಟಿ , ಪ್ರಶಸ್ತವಾದ ಕಾಲ ಮತ್ತು ಸ್ಥಳದ ಆಯ್ಕೆ, ಪರಿಸರ , ನಿರ್ಮಾಣ, ಅಲ್ಲಿನವರನ್ನು ಬರಮಾಡಿಕೊಂಡು ಸತ್ಕರಿಸುವುದು ಈ ಕಾರ್ಯಗಳೆಲ್ಲ ಲೌಕಿಕದ ಜನರಿಂದಲೇ ನಡೆಯುತ್ತದೆ .

ಆರಾಧನೆಯ ಮಧ್ಯಂತರ ಜಗತ್ತಿಗೆ ‘ಭೂತ’ಗಳು ಬರುತ್ತವೆ . ಹೀಗೆ ಭೂತಗಳು ಬರಬೇಕಾದರೆ ಜನರು ಅನಾದಿಕಾಲದಿಂದಲೂ ರೂಢಿಸಿಕೊಂಡು ಬಂದಿರುವ ಕೆಲವು ನಿಯಮಗಳಿವೆ . ಭೂತಗಳು ಸಾಕಾರ ರೂಪದಲ್ಲಿ ಕಾಣಿಸಿಕೊಳ್ಳಲು ಮಾಧ್ಯಮರೂಪದ ವ್ಯಕ್ತಿಯೊಬ್ಬನಿರುತ್ತಾನೆ (medium of deity). ಭೂತದ ಮಾಣಿ ಅಥವಾ ಪಾತ್ರಿ ಎಂದು ಆತನನ್ನು ಕರೆಯುತ್ತಾರೆ. ಮಧ್ಯಂತರ ಜಗತ್ತಿನಲ್ಲಿ ಕಾಣಿಸಿಕೊಳ್ಳುವ ಭೂತವು ಈ ನಿರ್ದಿಷ್ಟ ವ್ಯಕ್ತಿಯನ್ನು ಮಾಧ್ಯಮವಾಗಿ ಬಳಸಿಕೊಳ್ಳುತ್ತದೆ. ಭೂತವು ಮೈಮೇಲೆ ಬಂದು ಆವೇಶ ಗೊಳ್ಳುವ ಈ ವ್ಯಕ್ತಿಯು ಮಧ್ಯಂತರ ಜಗತ್ತಿನವನಾಗಿ ವ್ಯವಹರಿಸುತ್ತಾನೆ . ಲೌಕಿಕ ಮತ್ತು ಅಲೌಕಿಕ ಜಗತ್ತುಗಳ ನಡುವಿನ ಸಂಪರ್ಕವು ಈ ವ್ಯಕ್ತಿಯ ಮೂಲಕ ಏರ್ಪಡುತ್ತದೆ . ಭೂತದ ಜೊತೆಗಿನ ಸಂಭಾಷಣೆ, ಸುಖ ದುಃಖದ ಹಂಚಿಕೊಳ್ಳುವಿಕೆ, ಕ್ಷೇಮ ಸಮಾಚಾರದ ವಿಚಾರಣೆಗಳು ಈ ವ್ಯಕ್ತಿಯ ಮೂಲಕ ನಡೆಯುತ್ತವೆ. ಮಧ್ಯಂತರ ಜಗತ್ತಿನ ಮಾಧ್ಯಮವಾಗಿ ಒಬ್ಬ ವ್ಯಕ್ತಿಯು ವ್ಯವಹರಿಸಬೇಕಾದರೆ ಆತ ಸ್ನಾನ ಮಾಡಿರಬೇಕು , ಮಡಿಯಾದ ಬಟ್ಟೆಯನ್ನು ಉಟ್ಟಿರಬೇಕು, ಹೂವಿನ ಮಾಲೆ ಮತ್ತು ಆಭರಣಗಳನ್ನು ಧರಿಸಬೇಕು , ನಿತ್ಯ ಜೀವನದಲ್ಲಿಯೂ ಕೆಲವು ಆಚಾರಗಳನ್ನು ತಪ್ಪದೇ ಪಾಲಿಸಬೇಕು ಎಂಬ ನಿಯಮಗಳನ್ನು ಪಾಲಿಸಿಕೊಂಡು ಬರಲಾಗಿದೆ. ಈ ನಿಯಮಗಳೆಲ್ಲವೂ ಕೂಡ ಈ ನಿರ್ದಿಷ್ಟ ವ್ಯಕ್ತಿಯನ್ನು ಲೌಕಿಕದಿಂದ ಪ್ರತ್ಯೇಕಿಸಲು ಸಹಕರಿಸುವ ಅಂಶಗಳಾಗಿವೆ.

ದೈವವು ಮೈಮೇಲೆ ಬಂದು ಆವೇಶಕ್ಕೊಳಗಾಗಿರುವ ವ್ಯಕ್ತಿ (ದೈವದ ಮಾಧ್ಯಮರೂಪದ ವ್ಯಕ್ತಿ  – medium of deity)ಯ ಜೊತೆ  ದೈವ ಕಲಾವಿದ ಸಂವಹನ ಮಾಡುತ್ತಿರುವುದು .

ಭೂತವು ಒಬ್ಬ ವ್ಯಕ್ತಿಯ ಮೂಲಕ ಕಾಣಿಸಿಕೊಳ್ಳಬೇಕಾದರೆ ಅದಕ್ಕೆ ಕಾಲ ಮತ್ತು ಪರಿಸರದ ನಿರ್ಬಂಧ ಗಳಿರುತ್ತವೆ. ಭೂತಾರಾಧನೆಯ ಸಾರ್ವಜನಿಕ ಪ್ರದರ್ಶನವು ಹೆಚ್ಚಾಗಿ ರಾತ್ರಿಯ ವೇಳೆ ನಡೆಯುತ್ತದೆ. ಮಂದ ಬೆಳಕು , ಕತ್ತಲೆಯ ಹಿನ್ನೆಲೆ , ನಿದ್ದೆಗೆಟ್ಟು ನೋಡುವ ಜನರು , ಗದ್ದೆಯಂತಹ ಬಯಲು ಪ್ರದೇಶ ಮುಂತಾದ ಅಂಶಗಳು ಭೂತಾರಾಧನೆಗೆ ಒಂದು ಬಗೆಯ ಅಪಾರತೆಯನ್ನು ತಂದುಕೊಟ್ಟು, ಹೊಸ ಜಗತ್ತನ್ನು ಕಟ್ಟಿ ಕೊಡುತ್ತದೆ . ಆರಾಧನೆಯ ಸಂದರ್ಭದಲ್ಲಿ ಬಳಸಲಾಗುವ ಬಣ್ಣ , ವೇಷಭೂಷಣಗಳು , ಆಯುಧಗಳು , ಧಾರಣೆಯ ವಸ್ತುಗಳು, ಭೂತ ಕುಣಿಯುವ ಶೈಲಿ ಮತ್ತು ಅವುಗಳು ತೋರಿಸುವ ಅಟ್ಟಹಾಸ , ಅಬ್ಬರದ ಹಿಮ್ಮೇಳ ಇವು ಕೂಡ ಭೂತಗಳ ಅಲೌಕಿಕಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಭೂತವನ್ನು ಬರಮಾಡಿಕೊಳ್ಳಲು ಒಂದು ದಿನವನ್ನು ನಿಗದಿ ಮಾಡುವುದು , ಇದರ ಸಂಕೇತವಾಗಿ ಗೊನೆ ಕಡಿಯುವುದು , ಭೂತದ ಶೌರ್ಯ ಸಾಹಸವನ್ನು ಪ್ರತಿನಿಧಿಸುವ ಆಯುಧವನ್ನು ಮಂಚದ ಮೇಲಿಟ್ಟು ಪೂಜಿಸುವುದು, ಅವುಗಳನ್ನು ಮೆರವಣಿಗೆಯಲ್ಲಿ ತರುವುದು , ಭೂತದ ಆವಾಹನೆಗೆ ಸಿದ್ಧವಾಗಿ ದೈವ ಮಾಧ್ಯಮ ವ್ಯಕ್ತಿ ವಿಶಿಷ್ಟ ಉಡುಪನ್ನು ಧರಿಸಿ ನಿಲ್ಲುವುದು, ಜನರು ಸಾಮೂಹಿಕವಾಗಿ ಪ್ರಾರ್ಥನೆ ಮಾಡಿ ಅಲೌಕಿಕ ಜಗತ್ತಿನಿಂದ ಮಧ್ಯಂತರ ಜಗತ್ತಿಗೆ ಭೂತವನ್ನು ಆಮಂತ್ರಿಸಿವುದು, ಅದೇ ಮಧ್ಯಂತರ ಜಗತ್ತಿನಲ್ಲಿ ಭೂತದ ಮಾಧ್ಯಮವಾಗಿ ವ್ಯವಹರಿಸುವ ಕಲಾತ್ಮಕ ವೇಷವನ್ನು ಕಟ್ಟಿಕೊಂಡಿರುವ ವ್ಯಕ್ತಿಯ ಮೈಮೇಲೆ ಭೂತವು ಕಾಣಿಸಿಕೊಳ್ಳುವುದು, ಅತಿಮಾನವ ರೂಪದ ಭೂತಕ್ಕೆ ಗೌರವದಿಂದ ಉಡುಗೊರೆ ಫಲ ವಸ್ತುಗಳು , ಹಣ ,ಆಹಾರ ಇವುಗಳನ್ನು ಹರಕೆಯ ರೂಪದಲ್ಲಿ ಸಲ್ಲಿಸುವುದು, ಭೂತದ ಪ್ರತೀಕವಾಗಿರುವ ವ್ಯಕ್ತಿಯ ಮಾತುಗಳನ್ನು ಭೂತದ ಮಾತುಗಳೆಂದೇ ಸ್ವೀಕರಿಸಿ ಅದರ ಆದೇಶದಂತೆ ನಡೆದುಕೊಳ್ಳುವುದು, ಒಂದು ವರ್ಷದಲ್ಲಿ ಕೆಲವೇ ಬಾರಿ ಜನರ ಕಣ್ಣಿಗೆ ಗೋಚರವಾಗುವ ಈ ಕ್ರಮ ಮತ್ತು ಜನರು ಸಂತೃಪ್ತಿ ಹೊಂದುವ ಬಗೆ , ವಿಧಿ ರೂಪದಲ್ಲಿರುವ ಈ ಆಚರಣೆಗಳು ಭೂತದ ಕುರಿತಾಗಿರುವ ಜನಪದರ ಆಚರಣೆಗೆ ಸಾಂಸ್ಕೃತಿಕ ಸ್ವರೂಪ ವೊಂದನ್ನು ತಂದುಕೊಡುತ್ತದೆ .ಜನಪದರ ದೃಷ್ಟಿಯಲ್ಲಿ ಭೂತ ಅಂದರೆ ಪ್ರಶಸ್ತವಾದ ಕಾಲ ಸ್ಥಳ ಮತ್ತು ಪರಿಸರವನ್ನು ಕಲ್ಪಿಸಿದಾಗ ಮನುಷ್ಯ ರೂಪದಲ್ಲಿ ಕಾಣಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆದಿರುವ ಶಕ್ತಿಗಳು ಆಗಿವೆ. ಆರಾಧನೆಯ ಸಂದರ್ಭದಲ್ಲಿ ವಿಶಿಷ್ಟವಾದ ವೇಷಭೂಷಣಗಳ ಕುಣಿಯುವ, ಮಾತನಾಡುವ, ಆಹಾರವನ್ನು ಸ್ವೀಕರಿಸುವ, ಭೂತದ ವೇಷಧಾರಿಯಾದ ಕಲಾವಿದನು ಭೂತದ ಪ್ರತೀಕ ಆಗುತ್ತಾನೆ . ಭೂತ ವೇಷಧಾರಿಯಾದ ಕಲಾವಿದ ಕೆಳವರ್ಗದವನಾದರೂ ಆರಾಧನೆಯ ಸಂಧರ್ಭದಲ್ಲಿ ಎಲ್ಲಾ ವರ್ಗದ ಜನರು ಅವನ ಆದೇಶವನ್ನು ಪಾಲಿಸುತ್ತಾರೆ. ಒಬ್ಬ ವ್ಯಕ್ತಿಯ ಮೈಮೇಲೆ ಭೂತದ ಆವೇಶವಾಗುವ ಹಂತ ಮತ್ತು ಕೊನೆಗೆ ಶರೀರದಿಂದ ಬಿಟ್ಟು ಹೋಗುವ ಹಂತ ಇವುಗಳ ನಡುವಿನ ಅವಧಿ ಮಹತ್ವದ್ದಾಗಿರುತ್ತದೆ. ಉಳಿದ ಅವಧಿಯಲ್ಲಿ ಈ ವ್ಯಕ್ತಿಯು ಇತರ ಸಾಮಾಜಿಕರಂತೆ ಇರುತ್ತಾನೆ. ಇಂತಹ ವ್ಯಕ್ತಿಗಳು ಭೂತಗಳ ಪ್ರತೀಕವಾಗಿ ಕಾರ್ಯನಿರ್ವಹಿಸುವುದರಿಂದ ಸಮಾಜದಲ್ಲಿ ಇವರಿಗೆ ಗೌರವ ಇರುತ್ತದೆ .

ರಂಗಭೂಮಿಗೆ ಸಂಬಂಧಪಟ್ಟ ಬಹುತೇಕ ಎಲ್ಲಾ ಮೂಲಾಂಶಗಳು ದೈವಾರಾಧನಾ ರಂಗದಲ್ಲಿ ಕ್ರಿಯಾಶೀಲ ವಾಗುವುದರಿಂದ ಇದೊಂದು ಜನಪದ ಆರಾಧನಾ ರಂಗಭೂಮಿ ಅಥವಾ ಧಾರ್ಮಿಕ ರಂಗಭೂಮಿ ಎಂದು ಹೇಳುವುದಕ್ಕೆ ಅಡ್ಡಿಯಿಲ್ಲ. ಆದರೆ ಭೂತಾರಾಧನೆಯು ಈಗಲೂ ಜನಪದ ಸಂಸ್ಕೃತಿಯ ಜೀವಂತ ಭಾಗವಾಗಿಯೇ ಇರುವುದರಿಂದ, ಅದು ಕ್ರಿಯಾತ್ಮಕವಾಗಿ ಆಚರಣೆಗೊಳ್ಳುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭದಿಂದ ಅದನ್ನು ಪ್ರತ್ಯೇಕಿಸಿ ಲೌಕಿಕ ರಂಗ ಕಲೆಯಾಗಿ ಪರಿಗಣಿಸಲು ಸಾಧ್ಯವಿಲ್ಲ .

ಭೂತಾರಾಧನೆಯ ಪರಿಕಲ್ಪನೆಯನ್ನು ಮತ್ತು ಅದರಲ್ಲಿ ಬರುವ ಎಷ್ಟೋ ಘಟನೆಗಳನ್ನು ವಾಸ್ತವ ಎಂದು ತಿಳಿದುಕೊಳ್ಳಬೇಕಾಗಿಲ್ಲ. ಅದರ ಸಂದೇಶವೇನು ಎಂದು ತಿಳಿದುಕೊಳ್ಳುವುದು ಮುಖ್ಯ. ಆರಾಧನಾ ಪರಂಪರೆಯ  ಕಾರ್ಯ ಮತ್ತು ಅರ್ಥ (Meaning and Function) ಗಳ ಕುರಿತಾದ ಅಧ್ಯಯನದಲ್ಲಿ ಇಡೀ ಆರಾಧನಾ ಪ್ರಕ್ರಿಯೆಯ ಸಂದೇಶವೇನು ಎನ್ನುವುದು ನಾವು ಮುಖ್ಯವಾಗಿ ಗಮನಿಸಬೇಕಾದದ್ದು. ಆದ್ದರಿಂದ ಭೂತಗಳನ್ನು ದುಷ್ಟಶಕ್ತಿಗಳು (evil spirits, Devils , demons) ಎಂದು ಭಾವಿಸುವುದು ಜನಪದರ ದೃಷ್ಟಿಯಿಂದ ಸರಿಯಾಗಲಾರದು. ಆರಾಧನೆ ಹೊಂದುವ ಭೂತಗಳ ಇತಿಹಾಸವನ್ನು , ಅಲೌಕಿಕ ನೆಲೆಯಲ್ಲಿ ಆರಾಧನೆ ನಡೆಸುವ ಜನರ ಮನೋಧರ್ಮ , ಕಲಾತ್ಮಕ ಅಭಿವ್ಯಕ್ತಿ (artistic manifestation) ಯ ರೂಪದಲ್ಲಿರುವ ಒಂದು ವೇಷವನ್ನು ಭೂತ/ ದೈವ ಎಂದು ಒಪ್ಪಿಕೊಳ್ಳುವ ಮನೋಭಾವ – ಇವುಗಳ ಹಿನ್ನೆಲೆಯಲ್ಲಿ ‘ಭೂತ’ ಶಬ್ದದ ಅರ್ಥವನ್ನು ಸಾಂಸ್ಕೃತಿಕವಾಗಿ ಪರಿಭಾವಿಸ ಬೇಕಾಗಿದೆ.


ಗ್ರಂಥ ಋಣ :

೧.”ತುಳುವ ಜಾನಪದ : ಕೆಲವು ನೋಟಗಳು” – ಡಾ. ಅಮೃತ ಸೋಮೇಶ್ವರ
ಪ್ರಕಟಣೆ : ಪ್ರಸಾರಾಂಗ , ಕನ್ನಡ ವಿಶ್ವವಿದ್ಯಾಲಯ, ಹಂಪಿ , ೨೦೦೭

೨. “ತುಳು ಜನಪದ ಸಾಹಿತ್ಯ” – ಡಾ. ಬಿ. ಎ . ವಿವೇಕ ರೈ
ಪ್ರಕಟಣೆ : ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು , ೧೯೮೫

೩. “ಭೂತಾರಾಧನೆ : ಜಾನಪದೀಯ ಅಧ್ಯಯನ” – ಡಾ. ಕೆ. ಚಿನ್ನಪ್ಪ ಗೌಡ
ಪ್ರಕಟಣೆ : ಮದಿಪು ಪ್ರಕಾಶನ , ಮಂಗಳ ಗಂಗೋತ್ರಿ, ೧೯೯೦

೪. “ತುಳುನಾಡಿನ ಭೂತಾರಾಧನೆ  (ಲೇಖನ) ”   –  ಡಾ. ಅಶೋಕ್ ಆಳ್ವ
ಪ್ರಕಟಣೆ : ” ಅಣಿ ಅರದಲ ಸಿರಿ ಸಿಂಗಾರ ” –  ಸಾಹಿತ್ಯ ಬಳಗ , ವಾಶಿ , ನವಿ ಮುಂಬೈ

೫. “ಭೂತಗಳ ಅದ್ಬುತ ಜಗತ್ತು” – ಡಾ. ಲಕ್ಷ್ಮೀ . ಜಿ. ಪ್ರಸಾದ
ಪ್ರಕಟಣೆ : ಪ್ರಚೇತ ಬುಕ್ ಹೌಸ್, ಬೆಂಗಳೂರು , ೨೦೧೩


4 comments to “ಭೂತಾರಾಧನೆ – ಪ್ರವೇಶ”
    • ಕೋಲ ದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಸಿದ್ದಕ್ಕೆ ತುಂಬಾ ಧನ್ಯವದಗಳು. ಹಾಗೇ ನಿಮಗೆ ಗೊತ್ತಿದ್ದ ದೈವಗಳ ಇತಿಹಾಸದ ಬಗ್ಗೆಯೂ ಒಂದು article ಬರೆಯಿರಿ.

  1. Excellent Article . ಈ ಪಾಡ್ದನಗಳನ್ನು ಭೂತಧಾರಿ ಯಾದ ವ್ಯಕ್ತಿ ಅಥವಾ ಅವರ ಸಹವರ್ತಿಗಳು ಹಾಡುವುದು ಹಾಡುತ್ತಾರೆ. Correct this sentence.

Leave a Reply