ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ತುಳುನಾಡಿಗೆ ಬಂದ ಬಾಸೆಲ್ ಮಿಷನ್ ನಿಂದ ಪ್ರಾರಂಭಗೊಂಡು ಇಲ್ಲಿಯ ತನಕ ಭೂತಾರಾಧನೆಯ ದಾಖಲೀಕರಣದಲ್ಲಿ ಸಾಕಷ್ಟು ಕೆಲಸವಾಗಿದೆ. ಹೆಚ್ಚಿನವು ಬರಹ ರೂಪದಲ್ಲಿದೆ . ಆಡಿಯೋ ಮತ್ತು ವಿಡಿಯೋ ರೂಪದಲ್ಲಿಯೂ ದಾಖಲಾತಿಗಳು ನಡೆದಿವೆ . ಆದರೆ ಪುಸ್ತಕಗಳು ಮತ್ತು ಒಂದಷ್ಟು ಬ್ಲಾಗ್ ಗಳಲ್ಲಿರುವ ಮಾಹಿತಿಗಳು ಬಿಟ್ಟರೆ ಹೆಚ್ಚಿನವು ಜನರಿಗೆ ಮುಕ್ತವಾಗಿ ಲಭ್ಯವಿಲ್ಲ . ಸ್ವತಃ ನಾವೇ ಭೂತಾರಾಧನೆಯ ಕುರಿತಾದ ಅಧ್ಯಯನದಲ್ಲಿ ತೊಡಗಿಕೊಂಡಾಗ ಮಾಹಿತಿಗಳ ಸಂಗ್ರಹ ಸುಲಭವಾಗಿರಲಿಲ್ಲ . ಆಧುನಿಕ ಯುಗದಲ್ಲಿ ತಂತ್ರಜಾನವು ಮಾಹಿತಿಗಳ ಕ್ರೋಢೀಕರಣ ಮತ್ತು ಪ್ರಸರಣದಲ್ಲಿ ತನ್ನ ಪ್ರಭಾವನ್ನು ಬೀರುತ್ತಿರುವಂತೆ ಮಾಹಿತಿಯು ಮುಕ್ತವಾಗಿ ದೊರೆಯಬೇಕೆನ್ನುವುದು ಋತುಮಾನದ ಪ್ರಮುಖ ಆಶಯಗಳಲ್ಲೊಂದು .
2016 ನೇ ಇಸವಿಯ ಮಧ್ಯಭಾಗದಿಂದ ಈ ನಿಟ್ಟಿನಲ್ಲಿ ದುಡಿದಿದ್ದೇವೆ . ಮುಖ್ಯವಾಗಿ ದೃಶ್ಯ ಮಾಧ್ಯಮಕ್ಕೆ ಒತ್ತು ಕೊಟ್ಟು ವಿದ್ವಾಂಸರ ಸಂದರ್ಶಗಳನ್ನು , ಒಂದೊಂದು ಭೂತದ ಆರಾಧನಾ ಪದ್ದತಿಯನ್ನು ದಾಖಲಿಸಿ ಅಂತರ್ಜಾಲದಲ್ಲಿ ಮುಕ್ತವಾಗಿ ಬಿಡುಗಡೆ ಮಾಡುವುದಾಗಿ ನಿರ್ಣಯಿಸಿದ್ದೇವೆ .ವಿಡಿಯೋಗಳ ಜೊತೆ ಜೊತೆಗೆ , ಪಾಡ್ದನಗಳ ಆಡಿಯೋ ಮತ್ತು ಬರಹ ರೂಪ , ಆರಾಧನಾ ಪರಂಪರೆಗೆ ಸಂಬಂಧಪಟ್ಟ ಪೂರಕ ಮಾಹಿತಿಯುಳ್ಳ ಲೇಖನಗಳನ್ನು ಇಲ್ಲಿ ಪ್ರಕಟವಾಗುತ್ತವೆ . ಇಡೀ ಮಿಂದಾಣವು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಿರುತ್ತದೆ . ವಿಡಿಯೋಗಳಲ್ಲಿ ಉಪಶೀರ್ಷಿಕೆಗಳನ್ನು ಅಳವಡಿಸಲಾಗುತ್ತದೆ .
ಇತ್ತೀಚಿನ ವರ್ಷಗಳಲ್ಲಿ ಭೂತಾರಾಧನೆಯು ತನ್ನ ಆಂತರಿಕ ಮತ್ತು ಬಾಹ್ಯ ಸ್ವರೂಪಗಳಲ್ಲಿ ಕೆಲವು ಬಹುಮುಖ್ಯ ಬದಲಾವಣೆಗೆ ಒಳಗಾಗುತ್ತಿದೆ. ಸುಧಾರಣೆ ಮತ್ತು ವೈಭವೀಕರಣದ ಭ್ರಮೆಯಲ್ಲಿ ಕೆಲವು ಕಡೆಗಳಲ್ಲಿ ದೈವಾರಾಧನೆಯ ಸಹಜ ಗಾಂಭೀರ್ಯ ಮತ್ತು ಕಲಾತ್ಮಕತೆಗೆ ಧಕ್ಕೆಯಾಗುತ್ತಿದೆ. ದೈವಸ್ಥಾನಗಳ ಪುನರ್ ನಿರ್ಮಾಣ ಕಾಲದಲ್ಲಿ ಕೆಲವು ಕಡೆ ಪರಂಪರೆಯ ವಾಸ್ತು ಶೈಲಿಗೆ ಬದಲಾಗಿ ಭಿನ್ನ ಶೈಲಿಯ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ದೈವಗಳ ವೇಷಗಾರಿಕೆಯಲ್ಲಿಯೂ ಅನಪೇಕ್ಷಿತ ಬದಲಾವಣೆಗಳಾಗಿವೆ. ಪರಂಪರೆಯಿಂದ ಬಳಕೆ ಆಗುತ್ತಾ ಬಂದಿದ್ದ ತೆಂಗಿನ ಎಲೆಯ ಗರಿ, ಅಡಿಕೆಯ ಹಾಳೆಗಳ ಬದಲಾಗಿ ಆಡಂಬರ ಕ್ಕಾಗಿ ಚಿನ್ನ ಬೆಳ್ಳಿ ಯಂತಹ ಲೋಹಗಳ ಆಣಿಗಳನ್ನು ಸಿದ್ದಗೊಳಿಸಲಾಗಿದೆ. ಪದ್ಧತಿಯ ಮುಖವರ್ಣಿಕೆ ಬದಲಾಗಿ ನಾಟಕೀಯ ರೀತಿಯ ಮುಖ ವರ್ಣಗಳನ್ನು ಮಾಡುವುದುಂಟು. ಸ್ತ್ರೀ ದೈವಗಳ ವೇಷಗಳಿಗೆ ಆಧುನಿಕತೆಯ ಮೆರುಗು ಬಂದಿದೆ. ಕೆಲವು ಭೂತಗಳ ವೇಷಭೂಷಣ ಮತ್ತು ಅಭಿನಯದಲ್ಲಿ ಯಕ್ಷಗಾನದ ಅನುಕರಣೆ ಪ್ರಾರಂಭವಾಗಿದೆ. ಭೂತ ನರ್ತನಕ್ಕೆ ಪೂರಕವಾಗಿ ಆಧುನಿಕ ಚಲನಚಿತ್ರ ಸಂಗೀತವನ್ನು ವಾದ್ಯಗಳಲ್ಲಿ ನುಡಿಸಲಾಗುತ್ತಿದೆ . ಭೂತಾರಾಧನೆಯ ಆಂತರಿಕ ಅಂಶಗಳಾದ ನ್ಯಾಯ ತೀರ್ಮಾನ ಐಕ್ಯ ಪ್ರತಿಪಾದನೆ ಧಾರ್ಮಿಕತೆ ಮುಂತಾದ ಪರಿಕಲ್ಪನೆಗಳು ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಭೂತಾರಾಧನೆಯ ತಾಂತ್ರಿಕ ಭಾಗದ ಮೇಲೆ ಪ್ರಧಾನವಾಗಿ ವೈದಿಕ ಸಂಸ್ಕೃತಿಯ ಪ್ರಭಾವವೂ ಆಗುತ್ತಿರುವುದು ಕಂಡುಬರುತ್ತಿದೆ. ಕೆಲವೊಂದು ಭೂತಗಳ ಹೆಸರುಗಳೂ ಕೂಡ ಈಗಾಗಲೇ ವೈದೀಕರಣಗೊಂಡಿವೆ. ಉದ್ಯಮಿಗಳ ದೊಡ್ಡ ಮೊತ್ತದ ಹಣ ಹಣವು ಭೂತಾರಾಧನೆಯ ಕ್ಷೇತ್ರಕ್ಕೆ ಗಮನಾರ್ಹ ಮಟ್ಟದಲ್ಲಿ ಹರಿದು ಬರುತ್ತಿದೆ . ಹೀಗೆ ಭೂತಾರಾಧನೆ ಸಂಸ್ಕೃತಿಯು ಬದಲಾವಣೆಗೆ ಒಳಗಾಗುತ್ತಿರುವ ಈ ಕಾಲಘಟ್ಟದಲ್ಲಿ ಈ ಆರಾಧನಾ ಪ್ರಕಾರವನ್ನು ಆದಷ್ಟು ಮೂಲ ಸ್ವರೂಪದಲ್ಲಿಯೇ ದಾಖಲಿಸಿಕೊಳ್ಳುವುದು ಮತ್ತು ಅದು ಸುಲಭವಾಗಿ ಮತ್ತು ಮುಕ್ತವಾಗಿ ಜನಸಾಮಾನ್ಯರಿಗೆ ತಲುಪುವಂತಾಗುವುದು ತುರ್ತಾಗಿ ಹಾಗೂ ಅಗತ್ಯವಾಗಿ ಆಗಬೇಕಾದ ಕೆಲಸ ಎಂದುಕೊಂಡು ದಾಖಲಾತಿ ಪ್ರಾರಂಭಿಸಿದೆವು.ಮುಂದೆ ಈ ಬದಲಾವಣೆಗಳನ್ನು ಮತ್ತು ಅದರ ಪರಿಣಾಮಗಳನ್ನು ವಿಸ್ತೃತವಾಗಿ ದಾಖಲಿಸುವ ಆಶಯವಿದೆ. ಈ ದಾಖಲಾತಿಗೆ ದುಡಿದ ಕೈಗಳು ಹಲವು. ಪಟ್ಟಿ ದೊಡ್ಡದಿರುವುದರಿಂದ ಆಯಾ ದಾಖಲಾತಿಯ ಸಂಧರ್ಭಗಳಲ್ಲಿ ದುಡಿದವರ ಹೆಸರುಗಳನ್ನು ಮುಂದೆ ಆಯಾ ದಾಖಲಾತಿಯು ಪ್ರಕಟಣೆಯಾದಾಗ ತಿಳಿಸಲಾಗುತ್ತದೆ .
ಈ ಯೋಜನೆಗೆ ಮಾರ್ಗದರ್ಶನ ಮಾಡಿದ ಜನಪದ ವಿದ್ವಾಂಸರಾದ ಡಾ. ಅಮೃತ ಸೋಮೇಶ್ವರ , ಡಾ. ವಿವೇಕ್ ರೈ , ಡಾ. ಕೆ. ಚಿನ್ನಪ್ಪ ಗೌಡ , ಡಾ. ಪುರುಷೋತ್ತಮ ಬಿಳಿಮಲೆ ಮತ್ತು ಅಗತ್ಯ ಮಾಹಿತಿ ಒದಗಿಸಿಕೊಟ್ಟ ಡಾ. ಅಶೋಕ್ ಆಳ್ವ , ಡಾ. ರಾಜಶ್ರೀ , ಶಶಾಂಕ್ ನೆಲ್ಲಿತ್ತಾಯ , ಡಾ. ಲಕ್ಷ್ಮೀ . ಜೀ. ಪ್ರಸಾದ ಇವರುಗಳಿಗೆ ನಮ್ಮ ಕೃತಜ್ಞತೆಗಳು .
ಕುಂಟಾಡಿ ನಿತೇಶ್
(ಋತುಮಾನದ ಪರವಾಗಿ )
ಋತುಮಾನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ruthumana.com ಗೆ ಭೇಟಿಕೊಡಿ.